ಬೆಂಗಳೂರು,ಫೆ.21- ಕುರಿ ಕಾಯುವವನು ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಸಹಿಷ್ಣುತೆ ಇಲ್ಲದಿದ್ದರೆ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಲು ಮತ್ತು ಅಷ್ಟೊಂದು ಬಜೆಟ್ ಮಂಡಿಸಲು ಸಾಧ್ಯವಾಗುತ್ತಿತ್ತೇ? ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರ ಪರವಾಗಿ ಯಾರು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅದನ್ನು ಒಪ್ಪಲಾಗುವುದಿಲ್ಲ ಎಂದರು.
ದೇವರಾಜ್ ಅರಸ್ ಅವರ ದಾಖಲೆಯನ್ನೇ ಮುರಿದು, ಸಿದ್ದರಾಮಯ್ಯ ರಾಜ್ಯದಲ್ಲಿ ಸುಧೀರ್ಘಕಾಲ ಮುಖ್ಯಮಂತ್ರಿಯಾಗಿದ್ದಾರೆ. 16 ಬಜೆಟ್ ಮಂಡಿಸಿ, 17ನೇ ಬಜೆಟ್‌ಗೆ ತಯಾರಿ ನಡೆಸಿದ್ದಾರೆ. ಒಳ್ಳೆಯ ಆಡಳಿತ ನೀಡಿದ್ದಾರೆ ಸಹಿಷ್ಣುತೆ ಇಲ್ಲದೆ ಇದ್ದರೆ ಇದೆಲ್ಲವೂ ಸಾಧ್ಯವಾಗುತ್ತಿತ್ತೇ? ಎಂದು ಹೇಳಿದ್ದಾರೆ.
2013ರಿಂದ 2018ರ ನಡುವೆ ಮುಖ್ಯಮಂತ್ರಿಯಾಗಿದ್ದಾಗ ಹಲವು ಭಾಗ್ಯ ಸರಣಿಯ ಯೋಜನೆ ನೀಡಿದ್ದರು. ಈ ಬಾರಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಎಲ್ಲರೂ ಅವರ ಜೊತೆ ಇರುವ ಕಾರಣಕ್ಕೆ ಇದು ಸಾಧ್ಯವಾಗಿದೆ. ಆದರೂ ಯಾವ ಸಂದರ್ಭದಲ್ಲಿ ಅವರು ಹೇಳಿದ್ದಾರೋ ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯ ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಪಾಲಿಸುತ್ತಿದ್ದಾರೆ.
ಸಾಮಾಜಿಕ ನ್ಯಾಯದ ಬದ್ಧತೆ ಹೊಂದಿದ್ದಾರೆ. ಇದಕ್ಕೆ ರಾಜಕೀಯ ಎದುರಾಳಿಗಳಾಗಿರುವುದು ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಮಾತ್ರ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗೆ ಯಾರು ವಿರೋಧಿಗಳಿಲ್ಲ ಎಂದು ಸ್ಪಷ್ಟ ಪಡಿಸಿದರು. ಕಾಂಗ್ರೆಸ್ ನಲ್ಲಿ ಸುಧೀರ್ಘಕಾಲ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ನಮಲ್ಲಿ ಯಾರು ಸಿದ್ದರಾಮಯ್ಯ ಅವರಿಗೆ ವಿರೋಧಿಗಳಿಲ್ಲ. ಎಲ್ಲರೂ ಹಿತೈಷಿಗಳೇ ಆಗಿದ್ದಾರೆ ಎಂದರು.
ಬಾಗಲಕೋಟೆಯಲ್ಲಿ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ಮತ್ತು ನಿಯಮಗಳು ಎಲ್ಲಾ ಸಮುದಾಯಗಳಿಗೂ ಒಂದೇ ರೀತಿಯಲ್ಲಿವೆ. ಕಾಂಗ್ರೆಸ್ ಆಡಳಿತ ಕಾನೂನು ಮತ್ತು ಸಂವಿಧಾನ ಪಾಲನೆಯಲ್ಲಿ ಏಕರೂಪತೆಯನ್ನು ಅನುಸರಿಸುತ್ತದೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ತಕ್ಕ ಶಿಕ್ಷೆಯಾಗಲಿದೆ. ನಾನು ಕಲ್ಲು ಹೊಡೆದಿದ್ದರೆ ನಾನು ಕೂಡ ಜೈಲಿನಲ್ಲಿ ಇರುತ್ತಿದ್ದೆ ಎಂದರು. ಬಿಜೆಪಿಯವರು ಓಲೈಕೆ ರಾಜಕಾರಣ ಎಂಬುದು ಸೇರಿದಂತೆ ಯಾವುದೇ ರೀತಿಯ ಆರೋಪ ಮಾಡಲಿ. ಅವರು ಹೇಳಿದಂತೆ ಆಡಳಿತ ಮಾಡಲಾಗುವುದಿಲ್ಲ. ನಿಯಮದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಕಲ್ಬುರ್ಗಿ ನಗರಕ್ಕೆ ನಾರಾಯಣಪುರ ಅಣೆಕಟ್ಟೆಯಿಂದ ನೀರು ಸರಬರಾಜು ಮಾಡಲು 1500 ಕೋಟಿ ರೂಪಾಯಿಗಳ ಒಂದು ಯೋಜನೆಯನ್ನು ರೂಪಿಸಲಾಗಿದೆ. ಅದನ್ನು ಬಜೆಟ್‌ನಲ್ಲಿ ಅಳವಡಿಸಲು ಈಗಾಗಲೇ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಜಲ ಸಂಪನೂಲ ಸಚಿವರಾಗಿರುವ ಉಪಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಶಾಸಕರ ವಿದೇಶಿ ಪ್ರವಾಸಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಖಾಸಗಿಯಾಗಿ ಸ್ನೇಹಿತರು ಕುಟುಂಬದವರ ಜೊತೆ ಶಾಸಕರು ಹೋಗಿದ್ದಾರೆ. ಅದನ್ನು ಬೇಡ ಎಂದರೆ ಹೇಗೆ ? ಬಜೆಟ್ ಮಂಡನೆ ಮಾರ್ಚ್ 6ರಂದು ನಿಗದಿಯಾಗಿದೆ. ಅಧಿವೇಶನ ನಡೆಯುವಾಗ ಹೋಗಿದ್ದರೆ ಆತಂಕ ಪಡಬೇಕಿತ್ತು. ಅಧಿವೇಶನಕ್ಕೆ ಇನ್ನೂ ಸಮಯ ಇದೆ. ಆವರೆಗೂ ಖಾಸಗಿ ಕಾರ್ಯಕ್ರಮಗಳಲ್ಲೇ ಭಾಗವಹಿಸಬಾರದು ಎಂದರೆ ಹೇಗೆ ಎಂದರು.
ಸ್ನೇಹಮಯಿ ಕೃಷ್ಣ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಮೊದಲು ಅವರು ನೀಡಿದ್ದ ಹೇಳಿಕೆಗಳಿಗೆ ಸ್ಪಷ್ಟನೆ ಪಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಈಗಾಗಲೇ ಬಿ-ವರದಿ ಸಲ್ಲಿಸಿದ್ದಾರೆ. ಅದರ ನಂತರವೂ ಸ್ನೇಹಮಯಿ ಕೃಷ್ಣ ನನಗೆ ಎಲ್ಲವೂ ಗೊತ್ತು ಎಂಬಂತೆ ವರ್ತಿಸುತ್ತಿದ್ದಾರೆ. ಸಾಕ್ಷಾಧಾರ ಇಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಅವರ ಹೇಳಿಕೆಗಳ ಸತ್ಯಾಸತ್ಯತೆ ತಿಳಿದುಕೊಳ್ಳಲು ಪ್ರಯತ್ನಿಸುವುದು ತಪ್ಪು ಎಂದು ವಾದಿಸಿದರೆ ನಾವು ಏನು ಮಾಡುವುದು? ಎಂದರು.
ಸ್ನೇಹಮತಿ ಕೃಷ್ಣರನ್ನು ಬಂಧಿಸಿದ ನಂತರ ಎಲ್ಲಿಗೂ ಕರೆದುಕೊಂಡು ಹೋಗಿಲ್ಲ. ನಗರದ ಪೊಲೀಸ್ ಠಾಣೆಯಲ್ಲೇ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹೇಳಿದರು.
