Sunday, April 19, 2026
Homeರಾಜ್ಯವಿಶೇಷ ಅಧಿವೇಶನದಲ್ಲಿ ಸರ್ಕಾರವನ್ನು ಪೇಚಿಗೆ ಸಿಲುಕಿಸುವಲ್ಲಿ ವಿಪಕ್ಷಗಳು ಯಶಸ್ವಿ

ವಿಶೇಷ ಅಧಿವೇಶನದಲ್ಲಿ ಸರ್ಕಾರವನ್ನು ಪೇಚಿಗೆ ಸಿಲುಕಿಸುವಲ್ಲಿ ವಿಪಕ್ಷಗಳು ಯಶಸ್ವಿ

Opposition parties succeed in embarrassing the government in the special session

ಬೆಂಗಳೂರು,ಫೆ.5- ರಾಜ್ಯದಲ್ಲಿ ಕಾಂಗ್ರೆಸ್‌‍ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಅಧಿಕೃತ ವಿರೋಧ ಪಕ್ಷ ಬಿಜೆಪಿ ಮೊದಲ ಬಾರಿಗೆ ಸರ್ಕಾರವನ್ನು ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿದೆ.ಇಂದು ಮುಕ್ತಾಯಗೊಂಡ ಜಂಟಿ ವಿಶೇಷ ಅಧಿವೇಶನದಲ್ಲಿ ಸರ್ಕಾರವನ್ನು ಸಾಕಷ್ಟು ಪೇಚೆಗೆ ಸಿಲುಕಿಸಿ ರಾಜ್ಯದಲ್ಲಿ ವಿರೋಧ ಪಕ್ಷ ಇದೆ ಎಂಬುದನ್ನು ಜನಮಾಸದಲ್ಲಿ ಉಳಿಯುವಂತೆ ಮಾಡಿರುವುದು ಈ ಅಧೀವೇಶನದ ವಿಶೇಷ.

ಸಾಮಾನ್ಯವಾಗಿ ಈವರೆಗೂ ವಿರೋಧ ಪಕ್ಷ ಇತ್ತಾದರೂ ಸರ್ಕಾರದ ವೈಫಲ್ಯಗಳನ್ನು ಸದನದಲ್ಲಿ ಎಳೆ ಎಳೆಯಾಗಿ ಬಿಡಿಸುವಲ್ಲಿ ವಿಫಲವಾಗಿ ಕೆಲವು ಸಂದರ್ಭಗಳಲ್ಲಿ ಪೇಚಿಗೆ ಸಿಲುಕಿದ ಪ್ರಸಂಗಗಳೇ ಸಾಕಷ್ಟುದ್ದವು. ಇದೇ ಮೊದಲ ಬಾರಿಗೆ ಸದನದಲ್ಲಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಶಾಸಕರು ಸರ್ಕಾರದ ವಿರುದ್ಧ ಮುಗಿಬಿದ್ದು ಅಹೋರಾತ್ರಿ ಧರಣಿ ನಡೆಸಿದ್ದು, ಅಬಕಾರಿ ಲಂಚ ಪ್ರಕರಣದಲ್ಲಿ ಸಚಿವ ತಿಮಾಪುರ ರಾಜೀನಾಮೆಗೆ ಒತ್ತಾಯಿಸಿದ್ದು, ಸರ್ಕಾರದ ಕೆಲವು ವೈಫಲ್ಯಗಳನ್ನು ಸದನದಲ್ಲೇ ಮುಂದಿಟ್ಟು ವಿರೋಧ ಪಕ್ಷದ ನಿಜವಾದ ಕೆಲಸ ಏನೆಂಬುದನ್ನು ತೋರಿಸಿಕೊಟ್ಟಿತು.

ವಿಧಾನಸಭೆ ಹಾಗೂ ವಿಧಾನಪರಿಷತ್‌ ಎರಡು ಕಡೆ ಬಿಜೆಪಿ ಹೋರಾಟಕ್ಕೆ ಜೆಡಿಎಸ್‌‍ ಕೂಡ ವೈಮನಸ್ಸುಮರೆತು ಬೆಂಬಲ ಸೂಚಿಸಿದ್ದು ಈ ಅಧಿವೇಶನದ ವಿಶೇಷವಾಗಿತ್ತು.ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಸರ್ಕಾರದ ಪೂರ್ಣ ಭಾಷಣವನ್ನು ಓದದೆ ಕೇವಲ ಎರಡು ಸಾಲು ಓದಿ ನಿರ್ಗಮಿಸಿದ ದಿನದಿಂದ ಕಲಾಪ ಮುಕ್ತಾಯವಾಗುವವರೆಗೂ ಸರ್ಕಾರವನ್ನು ಎಲ್ಲಾ ಸಂದರ್ಭಗಳಲ್ಲೂ ಬಿಜೆಪಿ ಹಣಿಯುವಲ್ಲಿ ಸಿಕ್ಕ ಅವಕಾಶವನ್ನು ಈ ಬಾರಿ ಕಳೆದುಕೊಳ್ಳಲಿಲ್ಲ. ವಿರೋಧ ಪಕ್ಷದ ನಾಯಕರಾದ ಆರ್‌.ಅಶೋಕ್‌, ಚಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕರದ ಎನ್‌.ರವಿಕುಮಾರ್‌, ದೊಡ್ಡನಗೌಡ ಪಾಟೀಲ್‌ ಮಾಜಿ ಸಚಿವ ವಿ ಸುನಿಲ್‌ ಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಸರ್ಕಾರದ ವಿರುದ್ಧ ಹೋರಾಟ ನಡೆಸುವಲ್ಲಿ ಹಿಂದೆ ಬೀಳಲಿಲ್ಲ.


ಹೀಗಾಗಿ ಈ ಬಾರಿ ಪ್ರತಿಪಕ್ಷ ಮೊದಲ ಬಾರಿಗೆ ಎರಡು ಸದನಗಳಲ್ಲಿ ದೊಡ್ಡಮಟ್ಟದ ಸದ್ದು ಮಾಡಿತು. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್‌‍ ಮೈತ್ರಿ ಇದ್ದರೂ ವಿಪಕ್ಷವಾಗಿ ಅಬ್ಬರ ಸೃಷ್ಟಿಸುವಲ್ಲಿ ವಿಫಲವಾಗಿತ್ತು. ಆದರೆ, ಇದೀಗ ಬಿಜೆಪಿಯಲ್ಲಿ ಹೋರಾಟದ ಹುಮಸ್ಸು ತೀವ್ರಗೊಂಡಿದೆ. ಜಂಟಿ ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ಗಮನ ಸೆಳೆಯುವ ರೀತಿಯಲ್ಲಿ ಹೋರಾಟ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷ ತುಂಬಿದ್ದರೂ ವಿಪಕ್ಷವಾಗಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಿರಲಿಲ್ಲ. ಯಾವುದೇ ರಚನಾತಕ ಹೋರಾಟವನ್ನು ಹಮಿಕೊಂಡಿರಲಿಲ್ಲ.

ಮೂಡಾ, ವಾಲೀಕಿ ಹಗರಣದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ತಕ್ಕಮಟ್ಟಿಗೆ ಕಮಲ ಪಡೆ ಯಶಸ್ವಿ ಆಗಿತ್ತು. ಹಾಗಿದ್ದರೂ ಆಂತರಿಕ ಭಿನ್ನಾಭಿಪ್ರಾಯ ಕಮಲ ಪಡೆಗೆ ಹಿನ್ನಡೆಯನ್ನು ಉಂಟು ಮಾಡಿತ್ತು. ಕಮಲದ ಆಂತರಿಕ ಭಿನ್ನಮತ ಅಧಿವೇಶನದ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಮತ್ತೊಂದು ಕಡೆಯಲ್ಲಿ ಜೆಡಿಎಸ್‌‍ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ ಅದರಿಂದ ದೊಡ್ಡ ಪ್ರಮಾಣದ ಲಾಭ ಆಗಿರಲಿಲ್ಲ.
ಆದರೆ ಇದೀಗ ಬಿಜೆಪಿ ಚೇತರಿಸುತ್ತಿದೆ. ಜೆಡಿಎಸ್‌‍ ಜೊತೆಗಿನ ಹೊಂದಾಣಿಕೆಯನ್ನು ಗಟ್ಟಿಗೊಳಿಸಲು ಪ್ರಯತ್ನ ನಡೆಸುತ್ತಿದೆ. ಕರ್ನಾಟಕ ಬಿಜೆಪಿಯ ನಾಯಕರ ಪ್ರತಿರೋಧ ಸಾಲದು ಎನ್ನುವ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿತ್ತು. ಆದರೆ, ಹಾಲೀ ಅಧಿವೇಶನದಲ್ಲಿ ಬಿಜೆಪಿಯ ಮೂವರು ನಾಯಕರು, ಸಿದ್ದರಾಮಯ್ಯನವರ ಸರ್ಕಾರದ ವಿರುದ್ದ ಸಮರ್ಥವಾಗಿ ತಿರುಗಿಬಿದ್ದರು. ಅದು, ಅಬಕಾರಿ ಹಗರಣ ಇರಬಹುದು, ಹೇಟ್‌ ಸ್ಪೀಚ್‌ ಇರಬಹುದು. ಪ್ರತೀ ವಿಚಾರದಲ್ಲೂ, ಸರ್ಕಾರದ ಲೋಪದೋಷಗಳನ್ನು ಬೊಟ್ಟು ಮಾಡಿ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಕಳೆದ ಎರಡೂವರೆ ವರ್ಷಗಳಲ್ಲಿ ವಿಧಾನಮಂಡಲದ ಅಧಿವೇಶನದಲ್ಲಿ ಕಾವೇರಿದ ಚರ್ಚೆ, ಸರ್ಕಾರದ ಸಮರ್ಥನೆ ನೋಡಿದ್ದೇ ಕಮಿ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎದ್ದು ನಿಂತು, ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಉದಾಹರಣೆಯೂ ಕಮಿ ಎನ್ನಬಹುದು. ಆದರೆ, ಹಾಲೀ ಅಧಿವೇಶನದಲ್ಲಿ ಅದಕ್ಕೆ ವಿರುದ್ಧವಾದ ವಾತಾವರಣ ನಿರ್ಮಾಣವಾಗಿದೆ.

ಆದರೆ, ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, ಸರ್ಕಾರದ ವಿರುದ್ದ ತೀವ್ರ ಪ್ರತಿರೋಧ ತೋರುತ್ತಿರುವುದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷದ ನಾಯಕ ಆರ್‌.ಅಶೋಕ ಅವರಿಗಿಂತ, ಇತರ ಮೂವರು ಬಿಜೆಪಿಯ ಸೀನಿಯರ್ಸ್‌ಗಳು. ಇವರು, ಇಷ್ಟೊಂದು ಅಗ್ರೆಸ್ಸೀವ್‌ ಆಗಿ ಸದನದಲ್ಲಿ ಮಾತನಾಡಲು, ಹೈಕಮಾಂಡ್‌ ಕಡೆಯಿಂದ ಸಿಕ್ಕ ಗ್ರೀನ್‌ ಸಿಗ್ನಲ್‌ ಎನ್ನುವ ಮಾತು ಕೇಳಿ ಬರುತ್ತಿದೆ.

ಜಿಬಿಎ ಚುನಾವಣೆಗೆ ಸುಪ್ರೀಂಕೋರ್ಟ್‌ ಡೆಡ್‌ಲೈನ್‌ ಕೊಟ್ಟಿರುವುದರಿಂದ, ಬಿಜೆಪಿ ಹೈಕಮಾಂಡ್‌, ರಾಮ್‌ ಮಾಧವ್‌ ಅವರನ್ನು ಉಸ್ತುವಾರಿಯನ್ನಾಗಿ ರಾಜ್ಯಕ್ಕೆ ಕಳುಹಿಸಿದೆ. ಅವರು, ಬಿಜೆಪಿಯ ಹಲವು ನಾಯಕರನ್ನು ಪ್ರತ್ಯೇಕವಾಗಿ ಕರೆಸಿ ಮಾತನಾಡುತ್ತಿದ್ದಾರೆ.ಪ್ರತಿಪಕ್ಷವಾಗಿ ಕೆಲಸವನ್ನು ಮಾಡುತ್ತಿಲ್ಲ ಎನ್ನುವ ವಿಷಯವನ್ನು ರಾಜ್ಯ ಬಿಜೆಪಿ ನಾಯಕರು, ರಾಮ್‌ ಮಾಧವ್‌ ಅವರಿಗೆ ತಿಳಿಸಿದ್ದಾರೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದವು.

ಅವರು ಸರಿಯಾಗಿ ಕೆಲಸ ಮಾಡದೇ ಇದ್ದರೆ, ಅದನ್ನು ನಾವು ನೋಡಿಕೊಳ್ಳುತ್ತೇವೆ. ನೀವು ಕೂಡಾ, ವಿಪಕ್ಷದಲ್ಲಿ ಇರುವವರು ತಾನೇ? ನೀವ್ಯಾಕೆ ಸರ್ಕಾರದ ವಿರುದ್ದ ತಿರುಗಿ ಬೀಳಬಾರದು ಎನ್ನುವ ಗ್ರೀನ್‌ ಸಿಗ್ನಲ್‌ ಅವರಿಗೆ ರಾಮ್‌ ಮಾಧವ್‌ ಕಡೆಯಿಂದ ಸಿಕ್ಕಿದೆ ಎನ್ನಲಾಗಿದೆ.
ವಿಜಯೇಂದ್ರ ಮತ್ತು ಆರ್‌.ಅಶೋಕ್‌ ಅವರಿಗಿಂತ ಮೂವರು ಬಿಜೆಪಿಯ ಶಾಸಕರು ಈ ಬಾರಿಯ ಅಧಿವೇಶನದಲ್ಲಿ ಸರಿಯಾಗಿ ಅಬ್ಬರಿಸಿ, ಸರ್ಕಾರಕ್ಕೆ ಇರಿಸುಮುರಿಸು ತಂದಿದ್ದಾರೆ. ಅವರೆಂದರೆ ರಾಜಾಜಿನಗರ ಶಾಸಕ ಎಸ್‌‍.ಸುರೇಶ್‌ ಕುಮಾರ್‌, ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್‌ ಮತ್ತು ಹುಬ್ಬಳ್ಳಿ – ಧಾರವಾಡ ಪಶ್ಚಿಮ ಶಾಸಕ ಅರವಿಂದ್‌ ಬೆಲ್ಲದ್‌. ಈ ಮೂವರು ನಾಯಕರು, ಸರ್ಕಾರದ ವಿರುದ್ದ ಸದನದಲ್ಲಿ ತಿರುಗಿಬಿದ್ದರು. ಗ್ರೇಟರ್‌ ಬೆಂಗಳೂರು ಚುನಾವಣೆ, ಬಿಜೆಪಿಗೆ ಅತ್ಯಂತ ನಿರ್ಣಾಯಕವಾಗಿರುವುದರಿಂದ, ರಾಮ್‌ ಮಾಧವ್‌ ಅವರಿಗೆ ವಿಶೇಷ ಜವಾಬ್ದಾರಿಯನ್ನು ಅಮಿತ್‌ ಶಾ ನೀಡಿದ್ದಾರೆ.

ರಾಜ್ಯಪಾಲರ ಕದ್ದಾಲಿಕೆಯಾಗುತ್ತಿದೆ ಎಂದು ಸುನಿಲ್‌ ಕುಮಾರ್‌, ಸರ್ಕಾರದ ವಿರುದ್ಧ ತಿರುಗಿಬಿದ್ದ ಪರಿಗೆ, ಕಾನೂನು ಸಚಿವ ಎಚ್‌.ಕೆ.ಪಾಟೀಲ್‌‍ ಎದ್ದು ನಿಂತು ಸ್ಪಷ್ಟನೆಯನ್ನು ನೀಡಬೇಕಾಯಿತು. ಸುನಿಲ್‌ ಕುಮಾರ್‌ ಮಾತಿಗೆ, ಬಿಜೆಪಿಯ ಎಲ್ಲಾ ಶಾಸಕರು ಎದ್ದು ನಿಂತು, ಕಾಲ್‌ ಲಿಸ್ಟ್‌ ನೀಡಿ, ಯಾರೆಲ್ಲರ ಟ್ಯಾಪಿಂಗ್‌ ಆಗುತ್ತಿದೆ ಎಂದು ಸದನಕ್ಕೆ ಮಾಹಿತಿ ನೀಡಬೇಕೆಂದು ಪಟ್ಟು ಹಿಡಿದರು.
ಬಿಜೆಪಿಯ ಪಟ್ಟು ಜೋರಾಗುತ್ತಿದ್ದಂತೆಯೇ, ಸದನವನ್ನು ಎರಡೂವರೆ ತಾಸು ಟ್ಯಾಪಿಂಗ್‌ ಗಲಾಟೆ ಜೋರಾಗುತ್ತಿದ್ದಂತೆಯೇ, ಕಾನೂನು ಸಚಿವ ಪಾಟೀಲರ ಮಾತಿಗೆ ಒಪ್ಪದೇ, ಸುನಿಲ್‌ ಕುಮಾರ್‌ ವಾಕ್‌ ಪ್ರಹಾರ ನಡೆಸುತ್ತಲೇ ಇದ್ದರು. ಕೊನೆಗೆ, ಖುದ್ದು ಸಿಎಂ ಎದ್ದು ನಿಂತು, ಕೇಂದ್ರದಿಂದ ರಾಜ್ಯಪಾಲರಿಗೆ ಕರೆ ಬಂದಿರಬಹುದು ಎನ್ನುವ ಅನುಮಾನ ಎಂದು ಹೇಳಿದರು. ಆಗ, ಮತ್ತೆ ಆರ್‌.ಅಶೋಕ್‌, ಅರವಿಂದ್‌ ಬೆಲ್ಲದ್‌, ಸುರೇಶ್‌ ಕುಮಾರ್‌, ಮುಖ್ಯಮಂತ್ರಿಗಳನ್ನು ಮಾತಿನಲ್ಲಿ ಕಟ್ಟಿಹಾಕಲು ಪ್ರಯತ್ನಿಸಿದರು.

RELATED ARTICLES

Latest News