ಬೆಂಗಳೂರು, ಅ. 9: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಯೂಟ್ಯೂಬರ್ ಧ್ರುವ್ ರಾಠಿ ಭಾಗವಹಿಸಿದ ಹಿನ್ನೆಲೆಯಲ್ಲಿ, ಅವರ ಪೌರತ್ವ, ವಲಸೆ ಸ್ಥಿತಿ ಹಾಗೂ ವೀಸಾ ನಿಯಮಗಳ ಪಾಲನೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೇಂದ್ರ ಗೃಹ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿರುವ ಭಾಸ್ಕರ್ ರಾವ್, ಧ್ರುವ್ ರಾಠಿ ಜರ್ಮನ್ ಪೌರತ್ವ ಹೊಂದಿದ್ದಾರೆ ಎನ್ನಲಾಗಿದ್ದು, ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಸೇರಿದಂತೆ ಇತರರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತೀಯ ಚುನಾವಣಾ ಆಯೋಗದ ಪ್ರಕ್ರಿಯೆಯನ್ನು ಟೀಕಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾಸ್ಕರ್ ರಾವ್, ತಮ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್್ಸನಲ್ಲಿ ಹಂಚಿಕೊಂಡಿದ್ದಾರೆ.
ವೀಸಾ ನಿಯಮಗಳ ಪರಿಶೀಲನೆಗೆ ಆಗ್ರಹ:ವಿದೇಶಿ ಪ್ರಜೆಯೊಬ್ಬರು ನಿರ್ದಿಷ್ಟ ವೀಸಾ ಅಥವಾ ವಲಸೆ ಅನುಮತಿಯ ಆಧಾರದಲ್ಲಿ ಭಾರತದಲ್ಲಿರುವಾಗ, ದೇಶದ ಸಾಂವಿಧಾನಿಕ ಮತ್ತು ಕಾನೂನುಬದ್ಧ ಸಂಸ್ಥೆಗಳ ಕಾರ್ಯವೈಖರಿಗೆ ಸಂಬಂಧಿಸಿದ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಲು ಅಥವಾ ಭಾಷಣ ಮಾಡಲು ಕಾನೂನಿನ ಪ್ರಕಾರ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಭಾಸ್ಕರ್ ರಾವ್ ಪತ್ರದಲ್ಲಿ ತಿಳಿಸಿದ್ದಾರೆ.
ಧ್ರುವ್ ರಾಠಿ ಅವರ ಪ್ರಸ್ತುತ ಪೌರತ್ವ ಮತ್ತು ರಾಷ್ಟ್ರೀಯತೆ, ಭಾರತ ಪ್ರವೇಶಿಸಲು ಬಳಸಿದ ಪಾಸ್ಪೋರ್ಟ್, ದೇಶದಲ್ಲಿ ಉಳಿದುಕೊಳ್ಳಲು ಪಡೆದಿರುವ ವೀಸಾ ಅಥವಾ ಇತರ ಅನುಮತಿಯ ವಿಧ, ಭಾರತ ಭೇಟಿಯ ಉದ್ದೇಶ ಹಾಗೂ ಅದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಪರಿಶೀಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸುವುದು ಅಥವಾ ಭಾಷಣ ಮಾಡುವುದು ಅನ್ವಯಿಸುವ ವಲಸೆ ಮತ್ತು ವೀಸಾ ನಿಯಮಗಳ ಪ್ರಕಾರ ಅನುಮತಿಸಲ್ಪಟ್ಟಿದೆಯೇ ಹಾಗೂ ಇದಕ್ಕೆ ಮುಂಚಿತ ಅನುಮತಿ ಅಗತ್ಯವಿತ್ತೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. 1946ರ ವಿದೇಶಿಯರ ಕಾಯ್ದೆ, ವೀಸಾ ಷರತ್ತುಗಳು, ವಲಸೆ ನಿಯಮಗಳು, ಸಾಗರೋತ್ತರ ಭಾರತೀಯ ನಾಗರಿಕತ್ವ () ನಿಯಮಗಳು ಅಥವಾ ಇತರ ಅನ್ವಯಿಸುವ ಕಾನೂನುಗಳ ಉಲ್ಲಂಘನೆ ಸಾಬೀತಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.
ತಮ ಮನವಿಯು ಧ್ರುವ್ ರಾಠಿ ಅವರ ರಾಜಕೀಯ ಅಭಿಪ್ರಾಯಗಳು ಅಥವಾ ಸರ್ಕಾರ ಮತ್ತು ಚುನಾವಣಾ ಆಯೋಗದ ಕುರಿತ ಟೀಕೆಗಳಿಗೆ ಸಂಬಂಧಿಸಿದ್ದಲ್ಲ ಎಂದು ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿರುವ ವಿದೇಶಿ ಪ್ರಜೆಗಳು ಇಲ್ಲಿನ ಕಾನೂನು ಚೌಕಟ್ಟನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದೇ ಮನವಿಯ ಉದ್ದೇಶ ಎಂದು ತಿಳಿಸಿದ್ದಾರೆ.
ಪ್ರಕರಣದ ಸ್ವತಂತ್ರ ಪರಿಶೀಲನೆಗೆ ಅನುಕೂಲವಾಗುವಂತೆ ಸಂಬಂಧಿತ ವಲಸೆ ದಾಖಲೆಗಳು ಹಾಗೂ ದೇಶ ಪ್ರವೇಶ ಮತ್ತು ನಿರ್ಗಮನದ ದಾಖಲೆಗಳನ್ನು ಸಂರಕ್ಷಿಸಿ ಪರಿಶೀಲಿಸುವಂತೆಯೂ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
