ವಿಶಾಖಪಟ್ಟಣ (ಆಂಧ್ರ ಪ್ರದೇಶ),ಜೂ.9- ವಿಶಾಖ ಉಕ್ಕು ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ 8 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತ ಸಂಭವಿಸಿದ ಕಾರ್ಖಾನೆಗೆ ಭೇಟಿ ನೀಡಿದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸ್ವತಂತ್ರ ತನಿಖೆಗೆ ಆದೇಶಿಸಿದರಲ್ಲದೆ, ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಅವಘಡದ ಸುದ್ದಿ ತಿಳಿಯುತ್ತಿದ್ದಂ ತೆಯೇ ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಧಾವಿಸಿದ ಸಚಿವರು, ವಿಮಾನ ನಿಲ್ದಾಣದಿಂದ ನೇರವಾಗಿ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ತೆರಳಿದರು. ಉಕ್ಕು ಕರಗಿಸುವ ಘಟಕದಲ್ಲಿನ ಉಷ್ಣ ನಿರೋಧಕ ದ್ರವರೂಪದ ಕೊಳಗದಿಂದ ದ್ರವರೂಪದ ಲೋಹ ಸೋರಿಕೆಯಾದ ಹಿನ್ನೆಲೆಯಲ್ಲಿ ಸ್ಫೋಟ ಸಂಭವಿಸಿ ದುರಂತ ಘಟಿಸಿರಬಹುದು ಎಂದು ಅಂದಾಜಿಸಿದ್ದು, ಈ ಬಗ್ಗೆ ಅಧಿಕಾರಿಗಳು ಸಚಿವರಿಗೆ ವಿವರಣೆ ನೀಡಿದರು.
ದುರಂತ ನಡೆದ ಸ್ಥಳವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಅವರು, ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದರಲ್ಲದೆ, ದುರಂತದಲ್ಲಿ ಸಾವನ್ನಪ್ಪಿದ ಕಾರ್ಮಿಕರ ಬಗ್ಗೆ ಹಾಗೂ ದುರಂತಕ್ಕೆ ಕಾರಣವಾದ ಅಂಶಗಳ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸೂಚನೆ ನೀಡಿದರು.
ಪರಿಹಾರ:
ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಉದ್ಯೋಗ ಮತ್ತು ಅವರಿಗೆ ದೊರೆಯುವ ಪ್ರಯೋಜನಗಳ ಜತೆಗೆ 25 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ತೀವ್ರವಾಗಿ ಗಾಯಗೊಂಡ ಕಾರ್ಮಿಕರಿಗೆ 10 ಲಕ್ಷ ಪರಿಹಾರ ನೀಡಲಾಗುವುದು. ಅಲ್ಲದೆ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಕಾರ್ಖಾನೆಯೇ ಭರಿಸಲಿದೆ ಎಂದು ಸಚಿವರು ಘೋಷಿಸಿದರು.
ಜತೆಗೆ ಮೃತರ ಕುಟುಂಬ ಸದಸ್ಯರು ಮೃತರ ನಿವೃತ್ತಿಯ ದಿನಾಂಕದವರೆಗೆ ಸ್ಟೀಲ್ ಪ್ಲಾಂಟ್ ಟೌನ್‌ಶಿಪ್‌ನಲ್ಲಿ ತಮ ವಸತಿ ಗೃಹಗಳಲ್ಲಿ ವಾಸಿಸಲು ಅನುಮತಿಸಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಹಾಗೆಯೇ, ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಕಾರ್ಖಾನೆ ಭರಿಸಲಿದೆ ಎಂದು ಅವರು ಹೇಳಿದರು.
ದುರ್ಘಟನಾ ಸ್ಥಳ ಪರಿಶೀಲಿಸಿದ ನಂತರ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಅವರು, ಮೃತ ಕಾರ್ಮಿಕರ ಕುಟುಂಬಗಳ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಈ ದುರ್ಘಟನೆ ಬಗ್ಗೆ ನನಗೆ ತೀವ್ರ ಆಘಾತ ಉಂಟಾಗಿದೆ. ದುರಂತದ ಕಾರಣವನ್ನು ಪತ್ತೆ ಹಚ್ಚಲು ಸ್ವತಂತ್ರ ತನಿಖೆಗೆ ಆದೇಶಿಸಲಾಗಿದೆ. ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ವ ನೆರವನ್ನೂನೀಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
