Thursday, May 14, 2026
Homeರಾಜಕೀಯಹಿಜಾಬ್‌ ಟೀಕಿಸುವವರಿಗೆ , ಜನಿವಾರ ತೆಗೆಸಿದಾಗ ನೋವಾಗಿಲ್ಲವೇ..? : ಮಧು ಬಂಗಾರಪ್ಪ

ಹಿಜಾಬ್‌ ಟೀಕಿಸುವವರಿಗೆ , ಜನಿವಾರ ತೆಗೆಸಿದಾಗ ನೋವಾಗಿಲ್ಲವೇ..? : ಮಧು ಬಂಗಾರಪ್ಪ

To those who criticize the hijab, doesn't it hurt when you take it off Janivara

ಬೆಂಗಳೂರು, ಮೇ 14- ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅನುಮತಿಸಿರುವುದಕ್ಕೆ ಟೀಕೆ ಮಾಡುವವರಿಗೆ, ಜನಿವಾರ ತೆಗೆಸಿದಾಗ ನೋವಾಗಿಲ್ಲವೇ..? ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲಿಸುವ ನಿಯಮಗಳನ್ನೇ ನಾವು ಅನುಸರಿಸಿ ರಾಜ್ಯದಲ್ಲಿ ಕಾನೂನಾಗಿ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಹಿಜಾಬ್‌ ನಿಷೇಧಿಸುವ ನಿರ್ಧಾರ ಕೈಗೊಂಡು ಕೋರ್ಟ್‌ಗೆ ಹೋಗಿದ್ದು, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದೆ ಎಂದು ಹೇಳಿದರು. ಶಿಕ್ಷಣವೇ ಧರ್ಮ. ಅದಕ್ಕೆ ಕೈಹಾಕಬಾರದು, ಸ್ವತಂತ್ರವಾಗಿ ಇರಲು ಬಿಡಬೇಕು.ರಾಜ್ಯಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಅದೇಶ ಹೊರಡಿಸಿದೆೆ ಎಂದು ಹೇಳಿದರು.

ರಾಜ್ಯದಲ್ಲಿ ಉತ್ತಮ ಪರೀಕ್ಷಾ ಪದ್ಧತಿಯನ್ನು ಪಾಲನೆ ಮಾಡಲಾಗುತ್ತಿದೆ. ಇದರಿಂದಾಗಿ ಎಸ್ಸಿ-ಎಸ್ಟಿ-ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದನ್ನು ನೋಡಿ, ಕೆಲವರಿಗೆ ಹೊಟ್ಟೆಕಿಚ್ಚು ಬಂದಿದೆ. ಅದಕ್ಕೆ ಹಿಜಾಬ್‌ ವಿವಾದವನ್ನು ಮುಂದಿಟ್ಟುಕೊಂಡು ಗಲಾಟೆ ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್‌‍.ಸುರೇಶ್‌ಕುಮಾರ್‌, ಎನ್‌.ಮಹೇಶ್‌ ಅವರುಗಳು ಪರೀಕ್ಷಾ ವ್ಯವಸ್ಥೆಯಲ್ಲಿ ಏಕೆ ಬದಲಾವಣೆ ತರಲಿಲ್ಲ. ಆಗೆಲ್ಲಾ ಕಳ್ಳರಂತೆ ಕಾಪಿ ಹೊಡೆಸಿ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದರು. ಈಗ ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡು ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.

ಇಲ್ಲಿ ಹಿಜಾಬ್‌ ವಿಚಾರಕ್ಕೆ ಗಲಾಟೆ ಮಾಡುವವರು ಮೊದಲು ಸಿಇಟಿ ಪ ರೀಕ್ಷಾ ಅಕ್ರಮಗಳ ಬಗ್ಗೆ ಮಾತನಾಡಲಿ ಎಂದು ಸಚಿವರು ಆಗ್ರಹಿಸಿದರು.ನೀಟ್‌ ಪರೀಕ್ಷೆ ರದ್ದುಗೊಂಡಿದ್ದರಿಂದ ಶೇ.95 ಹಿಂದು ಸಮುದಾಯದ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ. ರಾಜ್ಯದಲ್ಲಿ 1.70ಲಕ್ಷ ಮಂದಿ ಸೇರಿ ದೇಶಾದ್ಯಂತ 25 ಲಕ್ಷ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆದಿದ್ದರು. ಈಗ ಅವರಿಗೆಲ್ಲಾ ಕೇಂದ್ರ ಸರ್ಕಾರದ ನಿರ್ಧಾರದಿಂದ ತೊಂದರೆಯಾಗಿದೆ ಎಂದು ಹೇಳಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಎಲ್ಲಾ ವಿಚಾರಗಳಿಗೂ ಧೈರ್ಯವಾಗಿ ಮಾತನಾಡುತ್ತಿದ್ದವರು, ಈಗ ಇದ್ದಕ್ಕಿಂದ್ದಂತೆ ಕಾರು ಹತ್ತಿ ಓಡಿ ಹೋಗಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದೆ, ಪರಾರಿಯಾಗಿದ್ದು ಯಾವ ಕಾರಣಕ್ಕೆ? ಅವರೇನು ತಪ್ಪು ಮಾಡಿದ್ದಾರೆಯೇ? ಕಳ್ಳತನ ಮಾಡಿದ್ದಾರೆಯೇ? ಶಿಕ್ಷಣ ಕಳ್ಳತಣವಾಗಿದೆಯೇ? ಎಂದು ಪ್ರಶ್ನಿಸಿದರು.

ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವವರು ಬಿಜೆಪಿಯ ನಾಯಕರಲ್ಲವೇ? ಆ ಕುರಿತು ರಾಜ್ಯ ಬಿಜೆಪಿಯವರು ಏಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪರೀಕ್ಷಾ ಪೇ ಚರ್ಚೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರಾದರು ನೀಟ್‌ ಪರೀಕ್ಷೆ ರದ್ದುಗೊಂಡಿರುವುದಕ್ಕೆ ಉತ್ತರ ನೀಡಬೇಕಲ್ಲವೇ? ಎಂದು ಒತ್ತಾಯಿಸಿದರು.ಕಾಂಗ್ರೆಸ್‌‍ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹಿಜಾಬ್‌ ಧರಿಸಲು ಅವಕಾಶ ನೀಡಲಾಗಿದೆ ಎಂಬ ಆರೋಪ ಸರಿಯಲ್ಲ. ಚುನಾವಣೆಯಲ್ಲಿ ಮತಗಳು ಪುಗಸ್ಸಟ್ಟೆ ಬರುವುದಿಲ್ಲ, ಭರವಸೆ ನೀಡಲೇಬೇಕು. ಕಾಂಗ್ರೆಸ್‌‍ನ ಗ್ಯಾರಂಟಿಗಳನ್ನು ವಿರೋಧ ಮಾಡುತ್ತಿದ್ದ ಬಿಜೆಪಿಯವರೇ ಈಗ ಅವುಗಳನ್ನು ಅಪ್ಪಿಕೊಂಡು ದೇಶಾದ್ಯಂತ ಜಾರಿಗೆ ತರುತ್ತಿದ್ದಾರೆ ಎಂದು ಹೇಳಿದರು.

ಹಿಜಾಬ್‌ ವಿಚಾರಕ್ಕೆ ಮುಸ್ಲಿಮರು ಎಂದು ವಿಭಜನೆ ಮಾಡಬಾರದು. ಅವರು ಈ ದೇಶದ ಪ್ರಜೆಗಳಲ್ಲವೇ? ಪ್ರಧಾನಿ ನರೇಂದ್ರ ಮೋದಿಯವರು ಕೋಟ್ಯಂತರ ಖರ್ಚು ಪಾಕಿಸ್ತಾನಕ್ಕೆ ಹೋಗಿ ಕೇಕ್‌ ತಿಂದು ಬರಲಿಲ್ಲವೇ? ಎಂದು ಪ್ರಶ್ನಿಸಿದರು.

ಟೀಕೆ ಮಾಡುವವರು ಬಾತೃತ್ವ ಎಂದು ಭಾಷಣ ಮಾಡಬಾರದು. ಜಾತ್ಯತೀತತೆ, ಪಕ್ಷಾತೀತತೆ ಎಂಬುದು ಕೇವಲ ಹೇಳಿಕೆಗೆ ಸೀಮಿತವೇ? ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರ ಈ ಸಿದ್ಧಾಂತಗಳಂತೆ ನಡೆದುಕೊಳ್ಳುವ ಜವಾಬ್ದಾರಿ ಹೊಂದಿರುವುದಿಲ್ಲವೇ? ಎಂದು ಕೇಳಿದರು.
ವಿರೋಧ ಮಾಡುವವರು ಕೇಂದ್ರದ ಪ್ರಧಾನಿಯವರ ನಿರ್ಧಾರವನ್ನು ವಿರೋಧಿಸಿದಂತೆ ಎಂದು ಹೇಳಿದರು.

RELATED ARTICLES

Latest News