Wednesday, May 13, 2026
Homeರಾಜ್ಯವಾಹನ ಚಾಲನೆ ವೇಳೆ ಮೊಬೈಲ್‌ ಬಳಸಿದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ

ವಾಹನ ಚಾಲನೆ ವೇಳೆ ಮೊಬೈಲ್‌ ಬಳಸಿದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ

Avoid Using a mobile phone while driving

-ವಿ.ರಾಮಸ್ವಾಮಿ ಕಣ್ವ
ಇಂದಿನ ಡಿಜಿಟಲ್‌ ಯುಗದಲ್ಲಿ ಮೊಬೈಲ್‌ ಫೋನ್‌ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿ ಮೆಸೇಜ್‌, ಸಾಮಾಜಿಕ ಜಾಲತಾಣ, ವಿಡಿಯೋ ವೀಕ್ಷಣೆ ಸೇರಿದಂತೆ ಅನೇಕ ಕಾರ್ಯಗಳಿಗೆ ಬಹುತೇಕ ಮಂದಿ ಮೊಬೈಲ್‌ ಮೇಲೆಯೇ ಅವಲಂಬಿತರಾಗಿದ್ದಾರೆ.
ಆದರೆ, ಇಂದು ಇದೇ ಮೊಬೈಲ್‌ ಬಳಕೆ ರಸ್ತೆ ಸುರಕ್ಷತೆಗೆ ದೊಡ್ಡ ತೊಡಕಾಗಿದೆ. ರಸ್ತೆ ಕಿರಿದಾಗಿರಲಿ, ಅಗಲವಾಗಿರಲಿ ಕೆಲ ಲಾರಿ, ಬಸ್‌‍, ಕ್ಯಾಂಟರ್‌, ಆಟೋ, ದ್ವಿಚಕ್ರ ವಾಹನ ಸವಾರರು ಹಾಗೂ ಇನ್ನಿತರ ವಾಹನಗಳ ಚಾಲಕರುಗಳು ವಾಹನಗಳನ್ನು ಚಲಾಯಿಸುತ್ತಲೇ ಮೊಬೈಲ್‌ ಬಳಸುತ್ತಿದ್ದಾರೆ.

ಅದರಲ್ಲೂ ಬೈಕ್‌, ಸ್ಕೂಟರ್‌ ಸವಾರರು ವಾಹನಗಳನ್ನು ಚಲಾಯಿಸುತ್ತಲೇ ಮೊಬೈಲ್‌ ಬಳಸುವ ವ್ಯವಸ್ಥೆ ಆತಂಕಕಾರಿ ಮಟ್ಟಕ್ಕೆ ಏರಿದೆ.ಬೆಂಗಳೂರು ನಗರದ ಕೆಲವು ರಸ್ತೆಗಳಲ್ಲಿ ಬೈಕ್‌, ಸ್ಕೂಟರ್‌ಗಳಲ್ಲಿ ಚಾಲನೆ ಮಾಡುತ್ತಲೇ ಸವಾರರು ಕರೆ ತೆಗೆದುಕೊಂಡು ಮಾತನಾಡುವುದು, ಮೆಸೇಜ್‌ ನೋಡಿ ಟೈಪ್‌ ಮಾಡುವುದು, ವಾಟ್ಸಾಪ್‌ ಪರಿಶೀಲಿಸುವುದು, ರೀಲ್ಸ್ ವೀಕ್ಷಿಸುವುದು ಸಾಮಾನ್ಯ ದೃಶ್ಯವಾಗಿದೆ.

ಕೆಲವರು ಭುಜದ ಮೇಲೆ ಇಟ್ಟುಕೊಂಡು, ಇನ್ನೂ ಕೆಲವರು ಹೆಲೆಟ್‌ ಒಳಗೆ ಮೊಬೈಲ್‌ ಸಿಗಿಸಿಕೊಂಡು ವಾಹನ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಪದೇ ಪದೇ ಹೇಳುತ್ತಿದ್ದಾರೆ.

ಇನ್ನೂ ಕೆಲ ಸವಾರರು/ಚಾಲಕರು ಚಾಲನೆ ಮಾಡುವಾಗ ಇಯರ್‌ ಫೋನ್‌ ಮತ್ತು ಬ್ಲೂ ಟೂತ್‌ ಬಳಸುತ್ತಿದ್ದಾರೆ. ಇದರಿಂದ ರಸ್ತೆ ಸುರಕ್ಷತೆಗೆ ದೊಡ್ಡ ಅಪಾಯ. ಏಕೆಂದರೆ, ಬೇರೆ ವಾಹನಗಳ ಹಾರ್ನ್‌ ಧ್ವನಿ, ಆಂಬುಲೆನ್‌್ಸನ ಸೈರನ್‌ ಅಥವಾ ಇನ್ನಿತರ ಎಚ್ಚರಿಕೆ ಶಬ್ಧಗಳು ಕೇಳಿಸದೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಭಾರತದ ಮೋಟಾರ್‌ ವಾಹನ ಕಾಯ್ದೆ ಪ್ರಕಾರ, ವಾಹನ ಚಾಲನೆ ವೇಳೆ ಮೊಬೈಲ್‌ ಬಳಸಿದರೆ ಅದು ಅಪಾಯಕಾರಿ ಚಾಲನೆ ಎಂದು ಪರಿಗಣಿಸಲಾಗುತ್ತದೆ.ಕಳೆದ ವರ್ಷ ಬೆಂಗಳೂರು ನಗರದಲ್ಲಿ ವಾಹನ ಚಾಲನೆಯಲ್ಲಿರುವಾಗ ಮೊಬೈಲ್‌ ಫೋನ್‌ ಬಳಕೆಯ 53,476 ಪ್ರಕರಣಗಳನ್ನು ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಒಟ್ಟು 29,601 ಪ್ರಕರಣಗಳನ್ನು ಸಂಚಾರಿ ಪೊಲೀಸರು ದಾಖಲಿಸಿದ್ದು, ದಂಡ ಹಾಕಿದ್ದಾರೆ.

ಮೊಬೈಲ್‌ ಬಳಕೆ ಕೇವಲ ದಂಡದ ವಿಷಯವಲ್ಲ, ಭವಿಷ್ಯದ ಚಾಲನಾ ಹಕ್ಕಿನ ಮೇಲೂ ಪರಿಣಾಮ ಬೀರುತ್ತದೆ. ಕೆಲವು ಪ್ರಕರಣಗಳಲ್ಲಿ ಸಂಚಾರಿ ಪೊಲೀಸರು ಚಾಲನಾ ಪರವಾನಗಿಯನ್ನು ಅಮಾನತು ಮಾಡುವ ಅಧಿಕಾರವನ್ನು ಸಹ ಹೊಂದಿದ್ದಾರೆ. ನಿರಂತರವಾಗಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ಚಾಲನಾ ಪರವಾನಗಿಯನ್ನು ರದ್ದುಪಡಿಸುವಂತೆ ಸಂಬಂಧಿಸಿದ ಆರ್‌.ಟಿ.ಓ. ಅಧಿಕಾರಿಗಳಿಗೆ ಸಂಚಾರಿ ಪೊಲೀಸರು ಪತ್ರ ಸಹ ಬರೆಯುತ್ತಾರೆ.

ಕೆಲವು ಸವಾರರು/ಚಾಲಕರು ಈ ರಸ್ತೆ, ವೃತ್ತಗಳಲ್ಲಿ ಸಂಚಾರಿ ಪೊಲೀಸರು ಇಲ್ಲ , ಮೊಬೈಲ್‌ನಲ್ಲಿ ಮಾತನಾಡಿದರೆ ಅವರಿಗೆ ಗೊತ್ತಾಗುವುದಿಲ್ಲ ಎಂದು ಮೊಬೈಲ್‌ ಬಳಸುತ್ತಾರೆ, ಇದು ತಪ್ಪು. ಬೆಂಗಳೂರು ನಗರದ ಬಹುತೇಕ ರಸ್ತೆ, ವೃತ್ತಗಳಲ್ಲಿ ಎ.ಐ. ಆಧಾರಿತ ಕ್ಯಾಮೆರಾಗಳ, ಸಿಸಿಟಿವಿ ಕ್ಯಾಮೆರಾಗಳು ಇವೆ. ಅವುಗಳು ನಿಮ ಉಲ್ಲಂಘನೆಗಳನ್ನು ರೆಕಾರ್ಡ್‌ ಮಾಡುತ್ತವೆ. ಇವುಗಳ ನಿಗಾ ವ್ಯವಸ್ಥೆ ಮೂಲಕ ಇಂತಹ ಉಲ್ಲಂಘ ನೆಗಳನ್ನು ಪತ್ತೆ ಹಚ್ಚುತ್ತಾರೆ. ಎ.ಎನ್‌.ಪಿ.ಆರ್‌. ತಂತ್ರಜ್ಞಾನದ ಸಹಾಯದಿಂದ ವಾಹನಗಳ ವಿವರ ಸಂಗ್ರಹಿಸಿ ಸ್ವಯಂಚಾಲಿತ ಇ-ಚಲನ್‌ಗಳನ್ನು ನಿಮ ಮೊಬೈಲ್‌ಗಳಿಗೆ ಕಳುಹಿಸಲಾಗುತ್ತದೆ.

ವೇಗದ ಚಾಲನೆ ಮತ್ತು ಮೊಬೈಲ್‌ ಬಳಕೆಯಿಂದ ಅವಘಡ ಉಂಟಾಗಿ ಕೆಲವು ಚಾಲಕರು/ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಂದು ಕ್ಷಣದ ನಿರ್ಲಕ್ಷ್ಯ ಜೀವ ತೆಗೆಯಬಹುದು. ಒಂದು ಮೊಬೈಲ್‌ ಕರೆ ಅಥವಾ ಮೆಸೇಜ್‌ಗೆ ಕೆಲವು ನಿಮಿಷ ಕಾಯಬಹುದು. ಆದರೆ, ಅಪಘಾತದಲ್ಲಿ ಕಳೆದುಕೊಂಡ ಜೀವ ಮರಳಿ ಬರುವುದಿಲ್ಲ.

ರಸ್ತೆ ಸುರಕ್ಷತೆ ಕೇವಲ ಪೊಲೀಸರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಚಾಲಕ/ಸವಾರನ ಕರ್ತವ್ಯವೂ ಆಗಿದೆ. ವಾಹನ ಚಲಾಯಿಸುವ ಮೊದಲು ಮೊಬೈಲ್‌ಅನ್ನು ಸೈಲೆಂಟ್‌ನಲ್ಲಿ ಇಡುವುದು ಅಥವಾ ತುರ್ತು ಸಂದರ್ಭ ಇದ್ದರೆ, ಕರೆ ಬಂದರೆ ತಕ್ಷಣ ವಾಹನವನ್ನು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿ ಮಾತನಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಅಥವಾ ಕಚೇರಿ , ಮನೆ ತಲುಪಿದ ನಂತರ ಬಳಸಬಹುದು.

RELATED ARTICLES

Latest News