Thursday, April 30, 2026
Homeರಾಜ್ಯಹೈಕಮಾಂಡ್‌ ಮೌನವಾಗಿದೆ ಎಂದರೆ, ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದರ್ಥ : ಪರಮೇಶ್ವರ್‌

ಹೈಕಮಾಂಡ್‌ ಮೌನವಾಗಿದೆ ಎಂದರೆ, ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದರ್ಥ : ಪರಮೇಶ್ವರ್‌

High command silence means no leadership change: Parameshwar

ಬೆಂಗಳೂರು, ಫೆ.8- ನಾಯಕತ್ವದ ವಿಚಾರವಾಗಿ ಹೈಕಮಾಂಡ್‌ ನಾಯಕರು ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಮೌನವಾಗಿದ್ದಾರೆ ಎಂದರೆ, ಯಾವುದೇ ಬದ ಲಾವಣೆ ಇಲ್ಲ ಎಂದೇ ಅರ್ಥ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದು ಕೊಳ್ಳುತ್ತದೆ. ಹಲವಾರು ರಾಜ್ಯಗಳಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾದಾಗ
ಅದನ್ನು ಸಮರ್ಥವಾಗಿ ವರಿಷ್ಠರು ನಿಭಾಯಿಸಿದ್ದಾರೆ. ಅವರಿಗೆ ಯಾವಾಗ ಏನು ನಿರ್ಧರಿಸಬೇಕು ಎಂದು ಚೆನ್ನಾಗಿಯೇ ತಿಳಿದಿದೆ ಎಂದರು.

ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ನಾಯಕತ್ವ ಬದಲಾವಣೆ ಮುಗಿದ ವಿಚಾರ ಎಂದು ಹೇಳಿರುವುದು ವೈಯಕ್ತಿಕ ಹೇಳಿಕೆ. ಎರಡೂವರೆ ವರ್ಷದ ಬಳಿಕ ಅಧಿಕಾರ ಬಿಟ್ಟು ಕೊಡುವ ಒಪ್ಪಂದವಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಿರುವ ಬಗ್ಗೆ ನಮಗೆ ಗೊತ್ತಿಲ್ಲ. ದೆಹಲಿಯಲ್ಲಿ ಚರ್ಚೆ ನಡೆದಾಗ ನಾವ್ಯಾರೂ ಇರಲಿಲ್ಲ. ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಿಗೆ ಮಾತ್ರ ನಿಖರ ಮಾಹಿತಿ ಇದೆ. ನಾವು ಹೊರಗಿದ್ದವರು. ಏನೇ ಹೇಳಿದ್ದರೂ, ಅದು ಹೇಳಿಕೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದರು.

ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಎಂದು ಹೈಕಮಾಂಡ್‌ ನಾಯಕರು ಈವರೆಗೂ ಎಲ್ಲಿಯೂ ಹೇಳಿಲ್ಲ. ಡಿ.ಕೆ.ಶಿವಕುಮಾರ್‌ ಅವರಿಗೆ ಗೊತ್ತಿರುವ ವಿಚಾರ ನಮಗೆ ಗೊತ್ತಿಲ್ಲ. ನಮ ಬಳಿಯಂತೂ ಯಾವ ಮಾಹಿತಿಯೂ ಇಲ್ಲ. ಅದಕ್ಕಾಗಿಯೇ ಇಂತಹ ಸಂದರ್ಭದಲ್ಲಿ ನಾವು ಹೈಕಮಾಂಡ್‌ ಕಡೆಗೆ ಕೈ ತೋರಿಸುತ್ತೇವೆ ಎಂದರು.

ರಾಜ್ಯದಲ್ಲಿನ ಬೆಳವಣಿಗೆಗಳು ಹಾಗೂ ಈ ರೀತಿಯ ಸಂದರ್ಭಗಳಿಂದ ರಾಜಕಾರಣದ ಮೇಲಾಗುವ ಪರಿಣಾಮಗಳ ಬಗ್ಗೆ ಹೈಕಮಾಂಡ್‌ಗೆ ತಿಳಿದಿರುತ್ತದೆ. ಯಾವಾಗ ಏನು ನಿರ್ಧಾರ ಮಾಡಬೇಕೋ, ಅದನ್ನು ಮಾಡುತ್ತಾರೆ. ನಾವು ಇಲ್ಲಿ ಚರ್ಚೆ ಮಾಡುವುದು ವ್ಯರ್ಥ ಎಂದರು.

ಕೇಂದ್ರದ ಸೂಚನೆಯಿಂದಲೇ ಮೆಟ್ರೋ ಪ್ರಯಾಣ ದರ ಏರಿಕೆ:
ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ಕೇಂದ್ರ ಸಚಿವರು ತಡೆ ಹಿಡಿದಿದ್ದಾರೆ. ಮೆಟ್ರೋ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೆತ್ತಿಕೊಂಡಿವೆ. ಬಿಎಂಆರ್‌ಸಿಎಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಸರ್ಕಾರವನ್ನು ಕೇಳಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ. ನಾನು ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದಾಗ ಅದರ ಕಾರ್ಯಶೈಲಿ ನೋಡಿದ್ದೇನೆ. ಅದರ ದರ ಹೆಚ್ಚಳ ಅಥವಾ ಕಡಿಮೆ ಮಾಡಲು ಕೇಂದ್ರ ಸರ್ಕಾರವೇ ನಿರ್ದೇಶನ ನೀಡುತ್ತದೆ, ರಾಜ್ಯ ಸರ್ಕಾರದ ನಿಯಂತ್ರಣ ಇಲ್ಲ ಎಂದರು.

67 ಕೋಟಿ ರೂಪಾಯಿ ವೆಚ್ಚದಲ್ಲಿ ಪೊಲೀಸ್‌‍ ಇಲಾಖೆಗೆ ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನ ಅಳವಡಿಕೆ ಅನಿವಾರ್ಯವಾಗಿದೆ. ಇದು ದ್ವೇಷದ ರಾಜಕಾರಣ, ಸಾಮಾಜಿಕ ಜಾಲತಾಣದ ಮೇಲೆ ನಿರ್ಬಂಧ, ವಿರೋಧ ಪಕ್ಷಗಳನ್ನು ಗುರಿಯಾಗಿಸುವ ಉದ್ದೇಶ ಎಂಬೆಲ್ಲಾ ಟೀಕೆಗಳು ಅನಗತ್ಯ ಎಂದರು.

ಒಂದು ಕಡೆ ಸೈಬರ್‌ ಅಪರಾಧ ಹಾಗೂ ಸಾಮಾಜಿಕ ಜಾಲತಾಣದ ಪರಿಣಾಮ ಹೆಚ್ಚಾಗಿದೆ. ಅದರಿಂದ ಅನಾಹುತಗಳಾಗುತ್ತಿವೆ. ಬಹಳಷ್ಟು ಮಂದಿ ಸಾವನ್ನಪ್ಪಿರುವ ಉದಾಹರಣೆಗಳು ಇವೆ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಹಾಳಾಗಿದೆ. ದ್ವೇಷದ ಪ್ರಕರಣಗಳು, ಭಯೋತ್ಪಾದಕರು ಸೈಬರ್‌ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಬೇಕಿದೆ. ಇಷ್ಟೆಲ್ಲಾ ಸಮಸ್ಯೆಯಾಗುತ್ತಿದ್ದರೂ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಜನ ಟೀಕೆ ಮಾಡುತ್ತಿದ್ದಾರೆ ಎಂದರು.

ಸೈಬರ್‌ ಕ್ರೈಂ ನಿಯಂತ್ರಿಸಲು ಹಣ ಖರ್ಚು ಮಾಡಬೇಕಿದೆ. ತೆಲಂಗಾಣ, ಆಂಧ್ರ ಪ್ರದೇಶದಲ್ಲೆಲ್ಲಾ ನಮಗಿಂತಲೂ ಹೆಚ್ಚು ಎಂದರೆ 200ರಿಂದ 300 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಇದಕ್ಕಾಗಿಯೇ ಪ್ರತ್ಯೇಕವಾದ ವೇದಿಕೆ ಸಿದ್ಧ ಪಡಿಸಿದ್ದಾರೆ. ಸೈಬರ್‌ ಸೆಂಟರ್‌ ಮಾಡಬೇಕಿದೆ. ರಾಜ್ಯದ ಸೈಬರ್‌ ಕ್ರೈಂನ ಡಿಜಿಪಿ ಪ್ರಣಬ್‌ ಮೊಹಂತಿ ಒಂದು ಸಾವಿರ ಕೋಟಿ ರೂಪಾಯಿ ಮೊತ್ತದ ಅಪರಾಧದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೆಲ್ಲಾ ನೋಡಿದರೆ 67 ಕೋಟಿ ರೂಪಾಯಿ ವೆಚ್ಚದಲ್ಲಿ ಸಲಕರಣೆ ಅಳವಡಿಸುವುದು ಅಗತ್ಯ ಇದೆಯೋ ಇಲ್ಲವೋ ಎಂಬುದನ್ನು ನಮಷ್ಟಕ್ಕೆ ನಾವೇ ಪ್ರಶ್ನಿಸಿಕೊಳ್ಳಬೇಕಿದೆ ಎಂದರು.

ವ್ಯಕ್ತಿಗತ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಲು ಮಾರುಕಟ್ಟೆಯಲ್ಲಿ ಬಹಳಷ್ಟು ಸಾಫ್ಟವೇರ್‌ಗಳಿವೆ. ಅಂತರ್ಜಾಲದಲ್ಲಿ ನಾನಾ ರೀತಿಯ ವ್ಯವಸ್ಥೆಗಳಿವೆ. ಅದನ್ನು ನಿಯಂತ್ರಿಸದೆ ಸರ್ಕಾರ ಅಳವಡಿಸುವ ಸೈಬರ್‌ ಕ್ರೈಂ ವಿಶ್ಲೇಷಣಾತಕ ಸಲಕರಣೆಗೆ ಅಡ್ಡಿ ಪಡಿಸುವುದು ಸರಿಯಲ್ಲ. ಒಂದು ವೇಳೆ ಈ ಯೋಜನೆಯನ್ನು ನಾವು ಕೈ ಬಿಟ್ಟರೆ ಬೇರೆ ರೀತಿಯ ಅಡ್ಡ ಪರಿಣಾಮಗಳು ಹೆಚ್ಚಾಗಲಿವೆ ಎಂದರು.

ಹಿಂದಿನಂತೆ ಸಂಪ್ರದಾಯ:
ನಿಗಮ ಮಂಡಳಿಗಳಿಗೆ ಸಚಿವ ಸಂಪುಟ ಸ್ಥಾನಮಾನ ನೀಡುವುದಕ್ಕೆ 26 ಕೋಟಿ ವೆಚ್ಚ ಮಾಡುತ್ತಿರುವುದನ್ನು ಪರಮೇಶ್ವರ್‌ ಸಮರ್ಥಿಸಿಕೊಂಡರು. ನಿಗಮ-ಮಂಡಳಿಗಳಿಗೆ ಸಚಿವ ಸ್ಥಾನಮಾನ ನೀಡದೆ ಇದ್ದರೆ ಅವುಗಳ ಪ್ರಭಾವ ಉಳಿಯುವುದಿಲ್ಲ. ಮೊದಲಿನಿಂದಲೂ ನಡೆದುಕೊಂಡು ಬಂದಂತೆ ಈಗಲೂ ರಾಜ್ಯ ದರ್ಜೆಯ ಸಚಿವ ಸ್ಥಾನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಪ್ರತಿವರ್ಷ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕಿರುವುದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ. ಹಾಗಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.ಜೈಲಿನಲ್ಲಿ ಶಂಕಿತ ಉಗ್ರನ ಸಾವಾಗಿರುವ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ಅಧಿಕಾರಿಗಳ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.

ಬಜೆಟ್‌ ಪೂರ್ವ ಸಭೆಯಲ್ಲಿ ಪೊಲೀಸ್‌‍ ಇಲಾಖೆಗೆ ಪ್ರಮುಖವಾಗಿ ನೇಮಕಾತಿಗೆ ಅನುಮತಿ, ಹೊಸ ವಾಹನಗಳ ಖರೀದಿ, ಪೊಲೀಸ್‌‍ ಗೃಹ ಯೋಜನೆಗೆ ಹೆಚ್ಚಿನ ಹಣಕಾಸು ಸೌಲಭ್ಯ, ಮಾದಕ ವಸ್ತು ಹಾಗೂ ಸೈಬರ್‌ ಕ್ರೈಂ ನಿಯಂತ್ರಣಕ್ಕೆ ಹೆಚ್ಚಿನ ಹಣ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

RELATED ARTICLES

Latest News