ಬೆಂಗಳೂರು,ಮೇ 19- ಕಟ್ಟಡವೊಂದರ ಶೌಚಾಲಯದ ಕಿಟಕಿಯಿಂದ ಒಳನುಗ್ಗಿ ಗೋಲ್ಡ್ ರಿಫೈನರಿ ಮಾಡಲು ಸಂಗ್ರಹಿಸಿಟ್ಟಿದ್ದ 24 ಕ್ಯಾರೆಟ್‌ನ ಚಿನ್ನದ ಗಟ್ಟಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ ಮೂವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ಮೌಲ್ಯದ 84 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀರಾಂಪುರ ನಿವಾಸಿಗಳಾದ ಅರ್ಜುನ್ (28), ರಾಕ್ (26) ಮತ್ತು ನಾಗರಾಜು (26) ಬಂಧಿತ ಆರೋಪಿಗಳು.ನಗರತ್‌ಪೇಟೆ ಮುಖ್ಯರಸ್ತೆಯಲ್ಲಿ ಮೆಹದಿ ಹಸನ್ ಎಂಬುವವರು ಜ್ಯೂವೆಲರಿ ಅಂಗಡಿಯನ್ನಿಟ್ಟುಕೊಂಡು ಚಿನ್ನದ ರಿಫೈನರಿ ಕೆಲಸ ಮಾಡುತ್ತಾರೆ.ಮೇ 6 ರಂದು ರಾತ್ರಿ ಕಂಪನಿಯ ಕಟ್ಟಡದ 5ನೇ ಮಹಡಿಯ ಶೌಚಾಲಯದ ಕಿಟಕಿಯಿಂದ ಕಳ್ಳರು ಒಳನುಗ್ಗಿ ಗೋಲ್ಡ್ ರಿಫೈನರಿ ಮಾಡಲು ಇಟ್ಟಿದ್ದ ಚಿನ್ನದ ಗಟ್ಟಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿಯನ್ನು ಕಲೆಹಾಕಿ ಮೂವರನ್ನು ಶ್ರೀರಾಂಪುರದ ಸನ್‌ರೈಜ್ ಸರ್ಕಲ್ ಬಳಿ ವಶಕ್ಕೆ ಪಡೆದಿದ್ದಾರೆ.
ಈ ಮೂವರನ್ನು ವಿಚಾರಣೆ ಒಳಪಡಿಸಿದಾಗ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಚಿನ್ನದ ಗಟ್ಟಿಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಆರೋಪಿಯೊಬ್ಬನ ಸ್ನೇಹಿತನಿಂದ 15 ಗ್ರಾಂ ಚಿನ್ನದ ಗಟ್ಟಿ ಹಾಗೂ ಓಕಳಿಪುರಂನ ಆರೋಪಿಯೊಬ್ಬನ ವಾಸದ ಮನೆಯಿಂದ 69 ಗ್ರಾಂ ಚಿನ್ನದ ಗಟ್ಟಿ ಸೇರಿದಂತೆ ಒಟ್ಟು 84 ಗ್ರಾಂ ಚಿನ್ನದ ಗಟ್ಟಿಗಳನ್ನು ಇನ್‌್ಸಪೆಕ್ಟರ್ ಅಶ್ವತ್‌ನಾರಾಯಣ ಸ್ವಾಮಿ ಹಾಗೂ ಸಿಬ್ಬಂದಿ ತಂಡ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇವುಗಳ ಒಟ್ಟು ಮೌಲ್ಯ 12 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಈ ಪ್ರಕರಣದಲ್ಲಿನ ಮಾಲು ಪತ್ತೆಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ.
ನಗರದ ವಿವಿಧ ಕಡೆ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿ ಸೆರೆ :
ಬೆಂಗಳೂರು,ಮೇ 19- ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಹೆಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿ 5.30 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಆಂಧ್ರಪ್ರದೇಶದ ಖಾದರ್‌ಪಾಷ (29) ಬಂಧಿತ ಆರೋಪಿ. ಈತ ನಗರದ ಮಂಗಮನಪಾಳ್ಯದಲ್ಲಿ ವಾಸವಾಗಿದ್ದುಕೊಂಡು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದನು.
ಹೆಚ್‌ಎಸ್‌ಆರ್ ಲೇಔಟ್‌ನ ಸೆಕ್ಟರ್ 7 ರ ನಿವಾಸಿ ಮಹೇಶ್ ಎಂಬುವವರು ಎಂದಿನಂತೆ ರಾತ್ರಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದು, ಬೆಳಗಾಗುವಷ್ಟರಲ್ಲಿ ಕಳುವಾಗಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಖಚಿತ ಮಾಹಿತಿ ಮೇರೆಗೆ ಆಕ್ಸ್ ಪರ್ಡ್ ಕಾಲೇಜು ಮೈದಾನದ ಹತ್ತಿರ ದ್ವಿಚಕ್ರ ವಾಹನ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಆತನನ್ನು ವಿಚಾರಣೆಗೆ ಒಳಪಡಿಸಿದಾಗ ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದು, ಅವುಗಳನ್ನು ಮಾರಾಟ ಮಾಡುವ ಸಲುವಾಗಿ ಹೆಚ್‌ಎಸ್‌ಆರ್ ಲೇಔಟ್‌ನ ಸೆಕ್ಟರ್ 1 ರ ಮಿಲಿಟರಿ ಕೌಂಪೌಂಡ್ ಬಳಿ ಹಾಗೂ ಅಗರದಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದಾನೆ.
ಆರೋಪಿಯ ಮಾಹಿತಿಯಂತೆ ಆ ಎರಡು ಜಾಗಗಳಿಂದ ಸುಮಾರು 5.30 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಧರ್ಮೇಗೌಡ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಆರೋಪಿಯ ಬಂಧನದಿಂದ ಹೆಚ್‌ಎಸ್‌ಆರ್ ಲೇಔಟ್‌ಠಾಣೆ 8 ಪ್ರಕರಣಗಳು, ಎಲೆಕ್ಟ್ರಾನಿಕ್ ಸಿಟಿ, ವರ್ತೂರು ಠಾಣೆಯ ತಲಾ1 ಪ್ರಕರಣಗಳು ಪತ್ತೆಯಾಗಿವೆ.
