Sunday, April 28, 2024
Homeಇದೀಗ ಬಂದ ಸುದ್ದಿಗೃಹಸಚಿವ ಪರಮೇಶ್ವರ್ ಮನೆಗೆ ಡಿಕೆಶಿ ದಿಢೀರ್ ಭೇಟಿ

ಗೃಹಸಚಿವ ಪರಮೇಶ್ವರ್ ಮನೆಗೆ ಡಿಕೆಶಿ ದಿಢೀರ್ ಭೇಟಿ

ಬೆಂಗಳೂರು,ಮಾ.15- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬೆಳಿಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಮನೆಗೆ ದಿಢೀರ್ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಗೃಹಸಚಿವರಾಗಿರುವ ಪರಮೇಶ್ವರ್ ಅವರು ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಬಾಕಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಇಂದು ಅವರ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದರು.ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ನಾವು ದೆಹಲಿಗೆ ಕಳುಹಿಸಿಕೊಡುತ್ತೇವೆ. ಅಂತಿಮ ನಿರ್ಧಾರವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ ನಮ್ಮ ಪಾತ್ರ ಕೇವಲ ಶಿಫಾರಸ್ಸು ಮಾಡುವುದಷ್ಟೇ ಎಂದು ಹೇಳಿದರು.

ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿಯ ಸಭೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಕಣ್ಣಿನ ತಪಾಸಣೆಗೆ ವೈದ್ಯರ ಸಮಯ ನಿಗದಿಯಾಗಿದೆ. ಅದಕ್ಕಾಗಿ ಅವರು ಬೆಂಗಳೂರಿನಲ್ಲೇ ಇದ್ದಾರೆ ಎಂದು ತಿಳಿಸಿದರು.

ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್‍ರವರನ್ನು ಭೇಟಿ ಮಾಡಲು ನಾನೇ ಅವರ ಮನೆಗೆ ಹೋಗಬೇಕೆಂದಿದ್ದೆ. ಅವರೇ ನಮ್ಮ ಮನೆಗೆ ಬರುತ್ತೇನೆ ಎಂದರು. ಇಂದು ಬೆಳಿಗ್ಗೆ ಭೇಟಿ ನೀಡಿದ್ದರು. ರಾಜ್ಯದ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ತೀರ್ಮಾನವಾಗಬೇಕಿದೆ. ಆ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ನಾನು ನನ್ನ ಅನಿಸಿಕೆಯನ್ನೂ ಹೇಳಿದ್ದೇನೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‍ಗೆ ಪೂರಕವಾದ ವಾತಾವರಣವಿದೆ. ಪಂಚಖಾತ್ರಿಗಳನ್ನು ಜಾರಿಗೊಳಿಸಿದ್ದೇವೆ. ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಹೀಗಾಗಿ ಕಾಂಗ್ರೆಸ್‍ನ ಅಭ್ಯರ್ಥಿಗಳು ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆಂಬ ವಿಶ್ವಾಸವಿದೆ ಎಂದರು.

RELATED ARTICLES

Latest News