ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರೇತರ ಸಂಸ್ಥೆಗಳು, ನಿಗಮ ಮಂಡಳಿಗಳಿಗೆ ಜನಪ್ರತಿನಿಧಿಗಳ ಉತ್ತರ ದಾಯಿತ್ವ ಸಾಂವಿಧಾನಿಕವಾಗಿ ಅಗತ್ಯವಾಗಿರುತ್ತದೆ. ಸರ್ಕಾರದ ವ್ಯಾಪ್ತಿಯ ಸುಮಾರು 120ಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರನ್ನು ಆಡಳಿತಾರೂಢ ಸರ್ಕಾರ ನೇಮಕ ಮಾಡುತ್ತದೆ.
ಆದರೆ ಕೆಲವು ನಿಗಮಗಳು ಅಧಿಕಾರಿಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಕರ್ನಾಟಕ ರಾಜ್ಯ ಹಣಕಾಸು ನಿಗಮ, ಕರ್ನಾಟಕ ಪಾನೀಯ ನಿಗಮದಂತಹ ಸಂಸ್ಥೆಗಳಿಗೆ ಸರ್ಕಾರ ಜನಪ್ರತಿನಿಧಿಗಳನ್ನು ಅಥವಾ ಅಧಿಕಾರೇತರರನ್ನು ನೇಮಕ ಮಾಡದಿರುವುದು ಯಕ್ಷಪ್ರಶ್ನೆಯಾಗಿ
ಉಳಿದಿದೆ.
ಪ್ರಸ್ತುತ ರಾಜ್ಯಸರ್ಕಾರದಲ್ಲಿ ಅಬಕಾರಿ ಹಗರಣ ಭಾರೀ ಸದ್ದು ಮಾಡಿದೆ. ಸಿಎಲ್-2, ಸಿಎಲ್-7, ಸಿಎಲ್-9 ಕ್ಕೆ ಕೋಟ್ಯಂತರ ರೂ.ಗಳ ಲಂಚಾರೋಪ ಇಲಾಖೆ ಸಚಿವರ ಮೇಲೆ ಕೇಳಿಬಂದಿದೆ. ಅಲ್ಲದೆ ಅಬಕಾರಿ ಇಲಾಖೆ ಉಪ ಆಯುಕ್ತರೇ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲು ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಬರೋಬ್ಬರಿ 6 ಸಾವಿರ ಕೋಟಿ ರೂ.ಗಳ ಹಗರಣವಾಗಿದ್ದು, ಅಬಕಾರಿ ಸಚಿವರ ರಾಜೀನಾಮೆಗಾಗಿ ವಿಧಾನಸಭೆ ಉಭಯಸದನಗಳಲ್ಲಿ ಪ್ರತಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುತ್ತಿವೆ.
ಈ ಎಲ್ಲವೂ ಒಂದೆಡೆಯಾದರೆ ಪಾನೀಯ ನಿಗಮಕ್ಕೆ ಜನಪ್ರತಿನಿಧಿಗಳ ನೇಮಕ ಇಲ್ಲ, ನಿಗಮಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳನ್ನು ನೇಮಕ ಮಾಡುತ್ತಿಲ್ಲ. ಈ ಹಿಂದಿನಿಂದಲೂ ಕೂಡ ಸರ್ಕಾರದ ವ್ಯಾಪ್ತಿಯಲ್ಲಿ ಐಎಎಸ್ ಅಧಿಕಾರಿಗಳ ನಿರ್ದೇಶಕ ಮಂಡಳಿಯಡಿಯಲ್ಲಿ ಕರ್ನಾಟಕ ಪಾನೀಯ ನಿಗಮ (ಕೆಎಸ್‌ಬಿಸಿಎಲ್) ಕೆಲಸ ನಿರ್ವಹಿಸುತ್ತಿದೆ.
ಸೆಕೆಂಡ್ ಸೇಲ್ಸ್ ಗೆ ಕಡಿವಾಣ, ಅಬಕಾರಿ ಸುಂಕ ರಚನೆ ಕಡಿತ, ತರ್ಕಬದ್ಧಗೊಳಿಸುವಿಕೆ, ಕಾರ್ಯವಿಧಾನ ಸರಳೀಕರಣ, ಐಎಂಎಲ್ ಬಿಯರ್ ಮತ್ತು ಸ್ಪಿರಿಟ್‌ನ ಚಾನಲೈಸೇಷನ್ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಅಬಕಾರಿ ನೀತಿಯನ್ನು ಜಾರಿಗೊಳಿಸಿ 2003 ರಲ್ಲಿ ಪಾನೀಯ ನಿಗಮವನ್ನು ಸ್ಥಾಪಿಸಿತ್ತು.
ರಾಜ್ಯದಲ್ಲಿ ಸರ್ಕಾರದ ಆದಾಯವನ್ನು ಹೆಚ್ಚಿಸುವುದು ಮತ್ತೊಂದೆಡೆ ಅಬಕಾರಿ ಸುಂಕ ಮತ್ತು ಶುಲ್ಕಗಳ ತಪ್ಪಿಸಿಕೊಳ್ಳುವಿಕೆಯನ್ನು ತಡೆಯುವುದು, ಗ್ರಾಹಕರಿಗೆ ನಿಜವಾದ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಪಾನೀಯ ನಿಗಮ ಕೆಲಸ ನಿರ್ವಹಿಸುತ್ತಿದೆ.
ಪ್ರಸ್ತುತ ನಾಲ್ವರು ನಿಗಮದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಕ್ಷರಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಆರ್ಥಿಕ ಇಲಾಖೆ), ವ್ಯವಸ್ಥಾಪಕ ನಿರ್ದೇಶಕರಾಗಿ (ಆರ್ಥಿಕ ಇಲಾಖೆ ಕಾರ್ಯದರ್ಶಿ) ವಾಣಿಜ್ಯ ಮತ್ತು ಸಂಪನೂಲ ವಿಭಾಗ, ನಿರ್ದೇಶಕರಾಗಿ ಕಾರ್ಯದರ್ಶಿ (ವೆಚ್ಚದ ವಿಭಾಗ) ಆರ್ಥಿಕ ಇಲಾಖೆ, ನಿರ್ದೇಶಕರಾಗಿ (ಅಬಕಾರಿ ಇಲಾಖೆ ಆಯುಕ್ತರು) ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಟ್ಟಾರೆ ನಾಲ್ವರು ಐಎಎಸ್ ಅಧಿಕಾರಿಗಳ ಆಡಳಿತದಲ್ಲಿ ಪಾನೀಯ ನಿಗಮ ಕಾರ್ಯ ನಿರ್ವಹಿಸುತ್ತಿದೆ. ಬರೋಬ್ಬರಿ 40 ಸಾವಿರ ಕೋಟಿ ರೂ.ಗಳಷ್ಟು ವಹಿವಾಟು ನಡೆಯುವ ಪಾನೀಯ ನಿಗಮದಲ್ಲಿ ಯಾವುದೇ ಜನಪ್ರತಿನಿಧಿಗಳ ಉತ್ತರದಾಯಿತ್ವ ಇಲ್ಲ. ಕಳೆದ ಸಾಲಿನಲ್ಲಿ 38 ಸಾವಿರ ಕೋಟಿ ರೂ.ಗಳ ವಹಿವಾಟು ನಡೆದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ವಹಿವಾಟು ನಡೆದಿರುವ ಸಾಧ್ಯತೆ ಇದೆ.
ದೇಶದ ಪ್ರಜಾಪ್ರಭುತ್ವದಲ್ಲಿ ಸಹಕಾರ ಕ್ಷೇತ್ರದಿಂದ ಹಿಡಿದು ಸರ್ಕಾರದವರೆಗೆ ಎಲ್ಲಾ ಜನಪ್ರತಿನಿಧಿಗಳ ವ್ಯಾಪ್ತಿಯಲ್ಲಿಯೇ ನಡೆಯಬೇಕು. ಆದರೆ ಕೆಲವೊಂದು ನಿಗಮ ಮಂಡಳಿಗಳು, ಕಾರ್ಪೊರೇಷನ್‌ಗಳಿಗೆ ಜನಪ್ರತಿನಿಧಿಗಳನ್ನು ನೇಮಕ ಮಾಡುವುದಿಲ್ಲ. ಸರ್ಕಾರ ಮತ್ತು ಆರ್ಥಿಕ ಇಲಾಖೆಯ ನೇರ ಸಂಪರ್ಕದಲ್ಲಿ ನಿಗಮಗಳು ನಡೆಯುತ್ತವೆ. ಇದಕ್ಕೆ ಕಾರಣವೇನು?, ಇದು ಗೌಪ್ಯತೆಯಿಂದ ನಡೆಯುವ ವ್ಯವಹಾರವೇ? ಎಂಬ ಅನುಮಾನ ಕಾಡುತ್ತಿವೆ.
ಎಲ್ಲವೂ ಪಾರದರ್ಶಕವಾಗಿ ನಡೆಯಬೇಕೆಂದು ಪಾರದರ್ಶಕ ಕಾಯ್ದೆಯನ್ನು ಜಾರಿಗೊಳಿಸಿರುವಾಗ ಜನಪ್ರತಿನಿಧಿತ್ವ ಕಾಯ್ದೆ ಜಾರಿಯಲ್ಲಿರುವಾಗ ಕೆಲವೊಂದು ನಿಗಮ ಮಂಡಳಿಗಳಿಗೆ ಮಾತ್ರ ಜನಪ್ರತಿನಿಧಿಗಳನ್ನು ನೇಮಕ ಮಾಡದೇ ಕೇವಲ ಅಧಿಕಾರಿಗಳೇ ದರ್ಬಾರು ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ?
ಅಥವಾ ಕಾಯ್ದೆಯಲ್ಲಿ ಜನಪ್ರತಿನಿಧಿಗಳ ನೇಮಕಕ್ಕೆ ಅವಕಾಶ ಇಲ್ಲವೇ….? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಹಸ್ರಾರು ಕೋಟಿ ರೂ.ಗಳ ವಹಿವಾಟು ನಡೆಯುವ ಇಲಾಖೆ ಪಾರದರ್ಶಕವಾಗಿ ನಡೆಯಬೇಕೆಂದರೆ ಜನಪ್ರತಿನಿಧಿಗಳ ಉತ್ತರದಾಯಿತ್ವ ಅಗತ್ಯ ಮತ್ತು ಅನಿವಾರ್ಯ.
